ಅರ್ಜುನಸಿಂಗ್
ಸಿಕ್ಕರ ನಾಲ್ಕನೆಯ ಗುರುವಾದ ರಾಮದಾಸನ ಮಗ. ತಂದೆಯ ಮರಣಾನಂತರ 1581 ರಲ್ಲಿ ಗುರು ಪಟ್ಟಕ್ಕೆ ಬಂದ. ತಂದೆ ಪ್ರಾರಂಭಿಸಿದ್ದ ಅಮೃತಸರದ ಸ್ವರ್ಣದೇವಾಲಯವನ್ನು ಪೂರ್ಣವಾಗಿ ಕಟ್ಟಿಸಿದ. ಸಿಕ್ಕರ ಪವಿತ್ರ ಗ್ರಂಥವಾದ ಆದಿಗ್ರಂಥದ ಸಂಪಾದನಾ ಕಾರ್ಯವನ್ನು ಪೂರ್ಣಗೊಳಿಸಿದ. ಧಾರ್ಮಿಕ ಮತ್ತು ಆಧ್ಯಾತ್ಮಿಕ ನೀತಿಯಿಂದ ಜನಪ್ರಿಯತೆ ಗಳಿಸಿದ್ದುದಲ್ಲದೆ ಅಕ್ಬರನ ವಿಶೇಷ ಮನ್ನಣೆಗೆ ಪಾತ್ರನಾಗಿದ್ದ. ಜಹಾಂಗೀರನ ಸಿಂಹಾಸನಾರೋಹಣಾ ನಂತರ ಆತನ ಮಗ ಖುಸ್ರು ದಂಗೆಯೆದ್ದು ದುಃಸ್ಥಿತಿಯಲ್ಲಿ ಲಾಹೋರಿನತ್ತ ಹೋಗುತ್ತಿದ್ದಾಗ ಅರ್ಜುನಸಿಂಗನನ್ನು ಸಂಧಿಸಿ ಆರ್ಶೀವಾದ ಬೇಡಿದ. ಬಾದಶಹನ ಮೊಮ್ಮಗನ ದುಃಸ್ಥಿತಿಯನ್ನು ಕಂಡು ಮರುಗಿದ ಅರ್ಜುನಸಿಂಗ್ ಖುಸ್ರುವಿಗೆ 5000 ರೂಪಾಯಿಗಳನ್ನು ಕೊಟ್ಟ. ಜಹಾಂಗೀರ್ ಖುಸ್ರುವನ್ನು ಸೆರೆಹಿಡಿದು ಶಿಕ್ಷಿಸಿದ ಅನಂತರ ಖುಸ್ರುವಿಗೆ ಸಹಾಯಮಾಡಿದ ಆರೋಪವನ್ನು ಹೊರಿಸಿ ಅರ್ಜುನಸಿಂಗನಿಗೆ ಎರಡು ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದ. ದಂಡದ ರೂಪದಲ್ಲಿ ಒಂದು ಕಾಸನ್ನೂ ಕೊಡಲು ಗುರು ಒಪ್ಪಲಿಲ್ಲ. ಕುಪಿತನಾದ ಜಹಾಂಗೀರ್ ಅರ್ಜುನಸಿಂಗನಿಗೆ 1606 ರಲ್ಲಿ ಮರಣದಂಡನೆ ವಿಧಿಸಿದ. ಮೊಗಲರಿಗೂ ಸಿಕ್ಕರಿಗೂ ಅದುವರೆಗೂ ಇದ್ದ ಅನ್ಯೋನ್ಯ ದೊರೆಯ ಈ ಕೃತ್ಯದಿಂದ ಕೊನೆಗೊಂಡಿತು. ಅರ್ಜುನಸಿಂಗನ ಅನಂತರ ಗುರು ಪಟ್ಟಕ್ಕೆ ಬಂದ ಹರಗೋವಿಂದಸಿಂಗನ ಕಾಲದಿಂದಲೂ ಸಿಕ್ಕರು ಮೊಗಲರಿಗೆ ಕಡು ವಿರೋಧಿಗಳಾದರು.  
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ